ರಾಮ ಮಂತ್ರವ ಜಪಿಸೋ
ಪುರಂದರ ದಾಸರು
ರಾಮ ಮಂತ್ರವ ಜಪಿಸೋ ಹೇ ಮನುಜ || ಪ ||
ಆ ಮಂತ್ರ ಈ ಮಂತ್ರ ಜಪಿಸಿ ಕೆಡಲು ಬೇಡ
ಸೋಮಶೇಖರ ತನ್ನ ಭಾಮೆಗೆ ಹೇಳಿದ ಮಂತ್ರ || ಅ.ಪ. ||
ಕುಲಹೀನನಾದರೂ ಕೂಗಿ ಜಪಿಸಿದ ಮಂತ್ರ
ಜಲಜ ವಾಣಿ ನಿತ್ಯ ಜಪಿಪ ಮಂತ್ರ
ಕಲುಷಪರ್ಪತಕಿದು ಕಲಶವಾಗಿಪ್ಪ ಮಂತ್ರ
ಸುಲಭದಿಂದಲಿ ಮೋಕ್ಷ ಸೂರೆಗೊಂಬುವ ಮಂತ್ರ || 1 ||
ಮರುತಾತ್ಮಜ ನಿತ್ಯ ಸ್ಮರಣೆ ಮಾಡುವ ಮಂತ್ರ
ಸರ್ವ ಋಷಿಗಳಲ್ಲಿ ಸೇರಿದ ಮಂತ್ರ
ಧುರಿತ ಕಾನನಕಿದು ಧ್ಯಾನ ಮಂತ್ರ
ಪೊರೆದು ವಿಭೀಷಣಗೆ ಪಟ್ಟಗಟ್ಟಿದ ಮಂತ್ರ || ೨ ||
ಜ್ಞಾನನಿಧಿ ಆನಂದ ತೀರ್ಥರು ಸಾನು
ರಾಗದಿನಿತ್ಯ ಸೇವಿಪ ಮಂತ್ರ
ಭಾನುಕುಲಾಂಬುಧಿ ಸೋಮನೆನಿಪ ನಮ್ಮ ದೀನರಕ್ಷಕ
ಪುರಂದರ ವಿಠಲನ ಮಂತ್ರ || ೩ ||